ದಕ್ಷಿಣ ಚೀನ ಸಮುದ್ರ -
ಚೀನ ಸಮುದ್ರದ ಒಂದು ಭಾಗ; ಪೆಸಿಫಿಕ್ ಸಾಗರದ ಚಾಚು. ಚೀನೀ ಹೆಸರು. ನಾನ್ ಹೈ. ದಕ್ಷಿಣ ಸಮುದ್ರ ಎಂದು ಇದರ ಅರ್ಥ. ಉತ್ತರ - ದಕ್ಷಿಣವಾಗಿ 2,900 ಕಿಮೀ (1,800ಮೈ) ಉದ್ದಕ್ಕೆ ಚಾಚಿದೆ. ಪೂರ್ವ - ಪಶ್ಚಿಮವಾಗಿ ಇದರ ಅಗಲ 960 ಕಿಮೀ. (600 ಮೈ).

ಫಿಲಿಫೀನ್ ದ್ವೀಪಗಳು ಮತ್ತು ಏಷ್ಯ ಭೂಖಂಡದ ಮಧ್ಯೆ ಇರುವ ದಕ್ಷಿಣ ಚೀನ ಸಮುದ್ರದಲ್ಲಿ 4,600 ಮೀ. ಆಳವುಳ್ಳ ಬೋಗುಣಿಯಾಕಾರದ ಭೂತಗ್ಗು ಇದೆ. ಫಿಲಿಫೀನ್ಸ್ ಮತ್ತು ಫಾಮೋಸ ದ್ವೀಪಗಳ ಮಧ್ಯೆ ಇರುವ ಸಾಗರತಳ ಕಣಿವೆ ಈ ಬೋಗುಣಿಯಿಂದ ಪೆಸಿಫಿಕ್ ಸಾಗರದ 2,500 - 3,000 ಮೀ. ಆಳವಾಗಿರುವ ಸಾಗರತಳ ಕಣಿವೆಗಳಿವೆ ಸಂಪರ್ಕವನ್ನು ಕಲ್ಪಿಸುತ್ತವೆ.

ನದಿಗಳ ನೀರಿನ ಸೇರುವಿಕೆಯಿಂದ ಈ ಸಮುದ್ರದ ಪಶ್ಚಿಮ ಭಾಗಗಳ ಮೇಲ್ಪದರಗಳಲ್ಲಿ ಪೂರ್ವ ಭಾಗದ್ದಕ್ಕಿಂತ ಕಡಿಮೆ ಲವಣತೆಯಿದೆ. ಆದರೆ 2,000 - 3,000 ಮೀ. ಆಳದಲ್ಲಿ ಲವಣತೆ ಪಶ್ಚಿಮ ಪೆಸಿಫಿಕ್ ಸಾಗರದ ಲವಣತೆಯಷ್ಟೇ ಇದೆ. 3,000 ಮೀ ಗಿಂತ ಹೆಚ್ಚು ಆಳಕ್ಕೆ ಹೋದಂತೆ ಉಷ್ಣತೆ ಕ್ರಮೇಣ ಅಧಿಕವಾದರೂ ಲವಣತೆ ಸ್ಥಿರವಾಗಿ ಉಳಿಯುತ್ತದೆ. ಉಷ್ಣತೆಯ ಅಧಿಕ್ಯದಿಂದ ಈ ಜನಭಾಗದ ಮೇಲೆ ಯಾವುದೇ ರೀತಿಯ ಅಸ್ಥಿರತೆಯುಂಟಾಗುವುದಿಲ್ಲ. ಆಮ್ಲಜನಕದ ಪ್ರಮಾಣ 3,000 ಮೀ. ಗಿಂತ ಕೆಳಭಾಗದಲ್ಲಿ ಒಂದೇ ರೀತಿಯಾಗಿರುತ್ತದೆ. ಆಳಕ್ಕೆ ತೆರೆದ ಸಾಗರ ಭಾಗಗಳಲ್ಲಿ ಅದು 3,000 ಮೀಟರ್‍ಗಿಂತ ಆಳಕ್ಕೆ ಹೋದಂತೆ ಅಧಿಕವಾಗುತ್ತದೆ.

ದಕ್ಷಿಣ ಚೀನ ಸಮುದ್ರ ಕರಾವಳಿಗಳಲ್ಲಿ ಮತ್ತು ದ್ವೀಪ ಪ್ರದೇಶಗಳಲ್ಲಿ ಹವಳು ದಿಣ್ಣೆಗಳಿವೆ. ಸಮುದ್ರದ ಮಧ್ಯದಲ್ಲಿರುವ ಹೈನಾನ್ ದ್ವೀಪಪ್ರದೇಶಗಳಲ್ಲಿರುವ ಹವಳದ ದಿಣ್ಣೆಗಳ ಬೆಳೆವಣಿಗೆ ಬಹಳಮಟ್ಟಿಗೆ ನಿಂತಿದೆ. ಪಶ್ಚಿಮ ಭಾಗದಲ್ಲಿ ದಕ್ಷಿಣ ಚೀನ ಸಮುದ್ರ ಅನೇಕ ಕಡೆಗಳಲ್ಲಿ ಭೂಮಿಯ ಕಡೆಗೆ ಚಾಚಿಕೊಂಡು ಅನೇಕ ಸಣ್ಣ ಆಖಾತಗಳು ಮತ್ತು ಕೊಲ್ಲಿಗಳು ಸೃಷ್ಟಿಯಾಗಿವೆ. ಈ ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳಿಂದ ಮತ್ತು ಭಾರಿ ಅಲೆಗಳಿಂದ ಕರಾವಳಿ ವಿಶೇಷವಾಗಿ ಕೊರೆತಕ್ಕೆ ಒಳಗಾಗಿದೆ. ಇಲ್ಲಿ ಸಮುದ್ರ ಬಹಳ ಬಿರುಸು. ಇದರಿಂದ ಮೇಕಾಂಗ್ ಮುಂತಾದ ಪರ್ಯಾಯ ದ್ವೀಪೀಯ ನದಿಗಳ ಸಂಚಯನಕ್ಕೆ ತೊಂದರಯುಂಟಾಗಿ ಆಖಾತದ ರಚನೆಗೆ ಕಾರಣವಾಗಿವೆ. ಆದರೆ ಸಾಕಷ್ಟು ರಕ್ಷಿತವಾಗಿರುವ, ಹೈನಾನ್ ದ್ವೀಪದ ಪಶ್ಚಿಮಕ್ಕಿರುವ ಟಾನ್‍ಕಿನ್ ಕೊಲ್ಲಿಯನ್ನು ಸೇರುವ ನದಿಗಳಿಗೂ ಉತ್ತರದ ಸಿಕಿಯಾಂಗ್ ನದಿಗೂ ವಿಶಾಲವಾದ ಮುಖಜ ಭೂಮಿಗಳಿವೆ ಈ ಭಾಗದ ಭೂಖಂಡದ ಮುಂಚಾಚೂ ಉದ್ದವಾಗಿದೆ. ಕರಾವಳಿಯ ಪ್ರವಾಹಗಳು ಮತ್ತು ನದಿಗಳು ತರುವ ಮಣ್ಣು ಕರಾವಳಿಯ ಸಮುದ್ರದ ಕೊರೆತದಿಂದಾಗಿ ಬಹಳ ಆಳದ ವರೆಗೆ ಭೂಖಂಡದ ಮುಂಚಾಚಿನ ಮೇಲೆ ಸಾಗಿ ಸಂಚಯನಗೊಂಡಿದೆ.  ಹೈನಾನ್ ದ್ವೀಪದಿಂದ 100 ಕಿಮೀ. ಪೂರ್ವದ ವರೆಗೆ ಮತ್ತು ಇಂಡೋಚೀನ ಪರ್ಯಾಯ ದ್ವೀಪದಿಂದ 50 ಕಿಮೀ. ಪೂರ್ವದವರೆಗೆ ಭೂಖಂಡ ಮುಂಚಾಚಿದೆ. ಅನಂತರ ಅತ್ಯಂತ ಕಿರಿದೂ ಕಡಿದೂ ಆದ ಭೂಖಂಡದ ಇಳುಕಲಿದೆ.  ಅದರಾಚೆಗೆ ಆಳವಾದ ಸಮುದ್ರತಳದ ಬೋಗುಣಿಯಿದೆ. ದಕ್ಷಿಣ ಚೀನ ಸಮುದ್ರದ ತಳದಲ್ಲಿ ಅಲ್ಲಲ್ಲಿ ಜ್ವಾಲಾಮುಖಿಗಳ ಕ್ರಿಯೆ ಇನ್ನೂ ನಡೆಯುತ್ತಿದೆ.

ದಕ್ಷಿಣ ಚೀನ ಸಮುದ್ರ ಸಾಕಷ್ಟು ಬೆಚ್ಚಗಿನ ನೀರಿನಿಂದ ಕೂಡಿರುವುದರಿಂದ ಭೂಜಲಸಂಪರ್ಕದಿಂದ ದೂರವಿರುವ ಪ್ರದೇಶಗಳಲ್ಲಿ ಪ್ಲ್ಯಾಂಕ್ಟನ್ ಮುಂತಾದ ಜೀವರಾಶಿಗಳ ಬೆಳೆವಣಿಗೆಗೆ ಸೂಕ್ತ ಪರಿಸರವೇರ್ಪಟ್ಟು, ಇಲ್ಲಿ ಮೀನುಗಾರಿಕೆಗೆ ಅನುಕೂಲವಾದ ಪ್ರದೇಶಗಳಿವೆ. 					(ನೋಡಿ- ಚೀನ-ಸಮುದ್ರ)
                               (ಎಸ್.ಕೆ.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ